ಪ್ರಕೃತಿ

ಸ್ವಾಭಾವಿಕ ಸಸ್ಯ ಮತ್ತು ಪ್ರಾಣಿಸಂಪತ್ತನ್ನು ಉಳಿಸಿಕೊಂಡು ದೇಶದ ಸೌಂದರ್ಯವನ್ನು ಕಾಪಾಡಿಕೊಳ್ಳುವುದೇ ಅಲ್ಲದೆ, ನಿಸರ್ಗದ ಸಮತೋಲ ಕದಡದಂತೆ ಇರಿಸುವ ಸಲುವಾಗಿ ಕರ್ನಾಟಕದಲ್ಲಿ ಅಭಯಾರಣ್ಯಗಳನ್ನು, ರಾಷ್ಟ್ರೀಯ ಉದ್ಯಾನಗಳನ್ನು ಸ್ಥಾಪಿಸಲಾಗಿದೆ. ಇವು ಬಹುವಾಗಿ ಅಂತಾರಾಷ್ಟ್ರೀಯ ನಿಯಮಗಳನ್ನೇ ಅನುಸರಿಸುತ್ತವೆ. ಆದರೆ ಸ್ಥಳೀಯ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಅಲ್ಪಸ್ವಲ್ಪ ಮಾರ್ಪಾಟುಗಳನ್ನು ಇವುಗಳಲ್ಲಿ ಕಾಣಬಹುದು. ಇವೆಲ್ಲವೂ ಅರಣ್ಯ ಇಲಾಖೆಯ ಅದಿsೀನಕ್ಕೆ ಒಳಪಟ್ಟಿವೆ. ಕೆಲವು ಅಭಯಾರಣ್ಯಗಳಲ್ಲಿ ಸಸ್ಯ ಹಾಗೂ ಪ್ರಾಣಿಗಳೆರಡಕ್ಕೂ ಸಂರಕ್ಷಣೆ ಒದಗಿದೆಯಾದರೆ ಇನ್ನು ಕೆಲವಲ್ಲಿ ಬರಿಯ ಪ್ರಾಣಿಗಳನ್ನು ಮಾತ್ರ ರಕ್ಷಿತಜೀವಿಗಳಾಗಿ ನೋಡಿಕೊಳ್ಳಲಾಗುತ್ತಿದೆ.

ಇತಿಹಾಸ

ಅಭಯಾರಣ್ಯಗಳ ಕಲ್ಪನೆ ಇತ್ತೀಚಿನದಲ್ಲ. ಪ್ರಾಚೀನ ಕಾಲದ ಋಷ್ಯಾಶ್ರಮಗಳು ವನ್ಯಜೀವಿಗಳಿಗೆ ಅಭಯಾರಣ್ಯಗಳಾಗಿದ್ದುವು. ಇಂಥ ಅರಣ್ಯಗಳಲ್ಲಿ ಮೃಗಪಕ್ಷಿಗಳನ್ನು ಕೊಲ್ಲುವುದು ಅಪರಾಧವೆಂದು ಪರಿಗಣಿಸಲ್ಪಡುತ್ತಿತ್ತು. ಅಭಯಾರಣ್ಯದಲ್ಲಿ ವನ್ಯಮೃಗಗಳು ಭಯವಿಲ್ಲದೆ ತಿರುಗಾಡುವುದನ್ನು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ನಮ್ಮ ಹಿರಿಯರು ಪ್ರಾಣಿಗಳ ಜೀವನವನ್ನು ಅಧ್ಯಯನ ಮಾಡಿ ಅದನ್ನು ಮಾನವನ ಬುದ್ಧಿವಿಕಾಸಕ್ಕಾಗಿ ಅಳವಡಿಸಿ ಕತೆಯ ರೂಪದಲ್ಲಿ ನಿರೂಪಿಸಿದ್ದಾರೆ ಎನ್ನುವುದಕ್ಕೆ ಪಂಚತಂತ್ರ ಮತ್ತು ಹಿತೋಪದೇಶದ ಕತೆಗಳು ಸಾಕ್ಷಿಯಾಗಿವೆ. ವೇದಕಾಲದ ಅನಂತರ ವನ್ಯಪ್ರಾಣಿಗಳ ಬಾಳು ಹದಗೆಡುತ್ತ ಬಂತು. ಅರಣ್ಯ ಪ್ರದೇಶವನ್ನು ವ್ಯವಸಾಯಕ್ಕೆ ತೆರವು ಮಾಡತೊಡಗಿದುದರ ಪರಿಣಾಮವಾಗಿ ವನ್ಯಮೃಗಗಳ ಸಂಖ್ಯೆ ಕಡಿಮೆಯಾಯಿತು. ಕ್ರಿ.ಪೂ. 3ನೆಯ ಶತಮಾನದಲ್ಲಿ ಈ ನಾಶವನ್ನು ತಡೆಯಲು ಅಶೋಕ ಚಕ್ರವರ್ತಿ ಹೊರಡಿಸಿದ ಒಂದು ಕಾಯಿದೆ ನಶಿಸುತ್ತಿದ್ದ ಅನೇಕ ಮೃಗಪಕ್ಷಿಗಳಿಗೆ ರಕ್ಷಣೆಯನ್ನು ಕೊಟ್ಟಿರಬೇಕು. ಅಶೋಕ ಚಕ್ರವರ್ತಿಯ ಈ ಕಾಯಿದೆ ಜಗತ್ತಿನಲ್ಲೇ ವನ್ಯಜೀವಿಗಳ ಸಂರಕ್ಷಣೆಗಾಗಿ ಮಾಡಿದ ಪ್ರಪ್ರಥಮ ಕಾಯಿದೆಯಾಗಿದೆ. ಜನಸಂಖ್ಯೆ ಬೆಳೆದಂತೆ ಉಳುವುದಕ್ಕಾಗಿ ಭೂಮಿ, ನೆಲೆಸುವುದಕ್ಕಾಗಿ ಹಳ್ಳಿಪಟ್ಟಣಗಳು, ವಾಹನಗಳ ಸಂಚಾರಕ್ಕಾಗಿ ಹೆದ್ದಾರಿ, ನೀರಾವರಿ-ವಿದ್ಯುಚ್ಫಕ್ತಿಗಾಗಿ ವಿಶಾಲವಾದ ಜಲಾಶಯಗಳು, ಅರಣ್ಯ ಕೈಗಾರಿಕೆಗಳಿಗೆ ನೆಲ ಇತ್ಯಾದಿಗಳ ಪೂರೈಕೆಗಾಗಿ ಮಿತಿಮೀರಿದ ಪ್ರಮಾಣದಲ್ಲಿ ಅರಣ್ಯ ನಾಶವಾಗಿ ಅವುಗಳಲ್ಲಿ ನೆಲೆಸಿದ್ದ ವನ್ಯಜೀವಿಗಳು ದಿನೇ ದಿನೇ ನಶಿಸುತ್ತಿವೆ. ಅಳಿಯುತ್ತಿರುವ ಈ ನಿಸರ್ಗ ಸಂಪತ್ತನ್ನು ಉಳಿಸಲು ಅನೇಕ ಪ್ರಯತ್ನಗಳು ನಡೆಯುತ್ತಿವೆ. 1948ರಲ್ಲಿ ಯುನೆಸ್ಕೊ ಆಶ್ರಯದಲ್ಲಿ ಫಾಂಟನ್ ಬ್ಲೂ ಎಂಬಲ್ಲಿ ಪ್ರಕೃತಿಸಂಪತ್ತನ್ನು ರಕ್ಷಿಸುವ ಅಂತಾರಾಷ್ಟ್ರೀಯ ಸಂಘ ಸ್ಥಾಪನೆಯಾಯಿತು. ಈ ಸಂಘದ ಪ್ರೇರಣೆಯಂತೆ ಭಾರತ ಸರ್ಕಾರ ಒಂದು ಪೂರ್ವಾಧಿಕಾರಿಯುಕ್ತ (ಅಡ್‍ಹಾಕ್) ಸಮಿತಿಯನ್ನು ನೇಮಿಸಿ, ಭಾರತದಲ್ಲಿ ವನ್ಯಜೀವಿಗಳ ರಕ್ಷಣೆಯ ಬಗ್ಗೆ ಯೋಜನೆಗಳನ್ನು ರೂಪಿಸಲು ಆದೇಶ ನೀಡಿತು. ಈ ಸಮಿತಿಯ ಶಿಫಾರಸುಗಳ ಮೇಲೆ 1952ರಲ್ಲಿ ಭಾರತೀಯ ವನ್ಯಪ್ರಾಣಿ ಸಂರಕ್ಷಣಾ ಸಂಸ್ಥೆ ರಚಿಸಲ್ಪಟ್ಟಿತು. ವನ್ಯಪ್ರಾಣಿ ರಕ್ಷಣೆಗೆ ತಕ್ಕ ವ್ಯವಸ್ಥೆ, ಕಾನೂನು ತಿದ್ದುಪಡಿ, ಮೃಗಬೇಟೆಗೆ ಹಲವಾರು ಆವಶ್ಯಕ ನಿಬಂಧನೆಗಳು, ಮೃಗಪಕ್ಷಿಗಳ ಚರ್ಮಕೊಂಬು ತುಪ್ಪಟ ಗರಿ ಇವುಗಳ ರಫ್ತಿಗೆ ನಿಬಂಧನೆಗಳು, ಅಭಯಾರಣ್ಯ ಹಾಗೂ ರಾಷ್ಟ್ರೀಯ ವನ್ಯಪ್ರಾಣಿ ಕ್ಷೇತ್ರ ನಿರ್ಮಾಣ ಇತ್ಯಾದಿ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿಸಿ ರಾಜ್ಯ ಸರ್ಕಾರಗಳಿಗೆ ರಾಜ್ಯ ವನ್ಯಪ್ರಾಣಿ ಸಂಸ್ಥೆಗಳ ಮೂಲಕ ಸಲಹೆಗಳನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.